ಅಧ್ಯಯನಗಳು

ಸಮಿತಿಯು ಇದುವರೆಗೆ ನಡೆಸಿರುವ ಪ್ರಮುಖ ಮೌಲ್ಯಮಾಪನ ಹಾಗೂ ಅಧ್ಯಯನಗಳು
ಸಮಿತಿಯು ಅನೇಕ ಮೌಲ್ಯಮಾಪನ ಕಾರ್ಯಗಳನ್ನು ಇದುವರಗೆ ನಡೆಸಿದೆ. ಇದು ಸಮಿತಿಯು ನಡೆಸುತ್ತಿರುವ ಅನೇಕ ಯೋಜನೆಗಳು ಮತ್ತು ಇತರೆ ಸಂಸ್ಥೆಗಳು ಹಾಗೂ ಇಲಾಖೆಯು ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಒಳಗೊಂಡಿದೆ. ಈ ಅನುಭವಗಳನ್ನು ಭಾರತ ಜ್ಞಾನ ವಿಜ್ಞಾನ ಸಮಿತಿಯು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಅಳವಡಿಸಿಕೊಳ್ಳುತ್ತಿದೆ. ಸಮಿತಿಯು ನಡೆಸಿದ ಪ್ರಮುಖ ಮೌಲ್ಯಮಾಪನ ಕಾರ್ಯಗಳೆಂದರೆ, ಚಾಮರಾಜನಗರದ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ, ಉಪ್ಪಾರ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಅಧ್ಯಯನ, ಚಾಮರಾಜನಗರ ಮತ್ತು ಯಳಂದೂರು ತಾಲೋಕುಗಳ ಆಯ್ದ ಪ್ರಾಥಮಿಕ ಶಾಲೆಗಳ ಮಕ್ಕಳ ಶೈಕ್ಷಣಿಕ ಸಾಧನೆಯ ಅಧ್ಯಯನ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೋಕಿನ ಉರ್ದು ಶಾಲೆಗಳ ಸ್ಥಿತಿಗತಿ ಅಧ್ಯಯನ ಹಾಗು 10 ಶಾಲೆಗಳ ಎಸ್.ಡಿ.ಎಂ.ಸಿಗಳ ಅಧ್ಯಯನ ಹಾಗೂ ಡಿಪಿಇಪಿ ಅಡಿಯಲ್ಲಿ ನಡೆದ ಚಿಣ್ಣರ ಅಂಗಳ ಕಾರ್ಯಕ್ರಮದ ಮೌಲ್ಯಮಾಪನ ಹಾಗೂ ವಿಶ್ಲೇಷಣೆ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಪನ್ಮೂಲ ತಂಡ ತನ್ನ ಅನುಭವಗಳ ಕೊಡುಗೆಯನ್ನು ಕೊಟ್ಟಿದೆ.

 ಚಾಮರಾಜನಗರದ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ:
ಈ ಅಧ್ಯಯನವು ಚಾಮರಾಜನಗರದ ಮುಸ್ಲಿಂ ಸಮುದಾಯದ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಇರುವ ಕಾರಣಗಳನ್ನು ಅಧ್ಯಯನ ಮಾಡಿ ಅದನ್ನು ಸಮುದಾಯದ ಸದಸ್ಯರೊಂದಿಗೆ ಹಂಚಿಕೊಳ್ಳುವುದು ಹಾಗೂ ಶೈಕ್ಷಣಿಕ ಉನ್ನತಿಗಾಗಿ ಸಹಭಾಗಿತ್ವ ಕಾರ್ಯತಂತ್ರಗಳನ್ನು ರೂಪಿಸುವುದಾಗಿತ್ತು. ಅದರಂತೆ ಮುಸ್ಲಿಂ ಸಮುದಾಯದ ಯುವಕರು ಮತ್ತು ಮುಖಂಡರ ಸಹಕಾರದೊಂದಿಗೆ ಈ ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನದಲ್ಲಿ ಮುಖ್ಯವಾಗಿ ಮುಸ್ಲಿಂ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಇರುವ ಕಾರ್ಯಕ್ರಮಗಳ ಮೌಲ್ಯಮಾಪನ ಮಾಡುವುದು ಹಾಗೂ ಅದರ ವಿಶ್ಲೇಷಣಾ ವರದಿಯನ್ನು ತಯಾರಿಸುವುದಾಗಿತ್ತು. ಪ್ರಸ್ತುತ ಈ ಕಾರ್ಯವು ಮುಗಿದಿದ್ದು, ಶ್ರೀ ಹಮೀದ್ ಮಂಜೇಶ್ವರ ಅವರು ಅದರ ವರದಿಯನ್ನು ತಯಾರಿಸಿರುತ್ತಾರೆ.
  
 ಉಪ್ಪಾರ ಜನಾಂಗದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಅಧ್ಯಯನ:
ಈ ಅಧ್ಯಯನವು ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದಿರುವ ಹಾಗೂ ಸಾಮಾಜಿಕವಾಗಿ ತಮ್ಮದೇ ಆದ ಸಂರಚನೆಯನ್ನು ಹೊಂದಿರುವ ಉಪ್ಪಾರ ಜನಾಂಗದ ಅಧ್ಯಯನ ಮಾಡಿ ವರದಿ ತಯಾರಿಸುವುದಾಗಿತ್ತು. ಮೂಲತಃ ಇದನ್ನು ರಾಷ್ಠ್ರೀಯ ಉನ್ನತ ಅಧ್ಯಯನ ಸಂಸ್ಥೆ, ಬೆಂಗಳೂರು ಇವರು ಆರಂಭಿಸಿದರು. ಇದರ ವರದಿಯಲ್ಲಿ ನೀಡಲಾಗಿದ್ದ ಕಾರ್ಯತಂತ್ರಗಳ ಆಧಾರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಅದು ಯಾವ ರೀತಿಯಾಗಿ ಪರಿಣಾಮ ಬೀರಿದೆ ಎಂದು ಪರಿಣಾಮಗಳ ಅಧ್ಯಯನ ಮಾಡಲಾಗುತ್ತಿದೆ. ಈ ವರದಿಯು ಉಪ್ಪಾರ ಜನಾಂಗದಲ್ಲಿ ಚಾಲ್ತಿಯಲ್ಲಿರುವ ಬಾಲ್ಯವಿವಾಹ, ಮಧ್ಯದಲ್ಲೇ ಶಾಲೆಬಿಡುವ ಮಕ್ಕಳು ಮತ್ತು ಯುವಕರ ಸಾಮಾಜಿಕ ಜವಾಬ್ದಾರಿಯನ್ನು ಹೊರುವ ಮನೋಭಾವಗಳ ಮೇಲೆ ಕಾರ್ಯಕ್ರಮಗಳು ಮಾಡಿರುವ ಪರಿಣಾಮಗಳನ್ನು ಅಧ್ಯಯನ ಮಾಡುವುದಾಗಿತ್ತು. ಅಂಕಿಅಂಶಗಳ ದಾಖಲೀಕರಣ ಮುಗಿದಿದ್ದು, ಈ ವರದಿಯು ಸಧ್ಯದಲ್ಲೇ ಪೂರ್ಣಗೊಳ್ಳಲಿದೆ.

    ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಸಾಧನೆಯ ಮೌಲ್ಯಮಾಪನ:
ಈ ಅಧ್ಯಯನವು ಜಿಲ್ಲೆಯ ಆಯ್ದ ಪ್ರಾಥಮಿಕ ಶಾಲೆಗಳ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡುವುದಾಗಿತ್ತು. ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ನೀಡಿರುವ ತರಬೇತಿಗಳು ಮತ್ತು ಪ್ರೋತ್ಸಾಹದಾಯಕ ಯೋಜನೆಗಳಿಂದ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯು ಅನುಷ್ಠಾನಗೊಳಿಸಿರುವ ವಿದ್ಯಾಂಕುರ ಯೋಜನೆಗಳ ಕಾರ್ಯಕ್ರಮಗಳಿಂದ ಮಕ್ಕಳ ಶೈಕ್ಷಣಿಕ ಮಟ್ಟದಲ್ಲಿ ಆಗಿರುವ ಬದಲಾವಣೆಗಳನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಪ್ರಸ್ತುತ ಇದರ ಅದ್ಯಯನ ವರದಿಯು ಸಿದ್ಧಗೊಂಡಿದೆ.