ಬಿಜಿವಿಎಸ್ ಹಿನ್ನೆಲೆ

ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಹುಟ್ಟಿಕೊಂಡ ಒಂದು ಸಂಸ್ಥೆ. ಆಂದೋಲನದ ಮೂಲಕ ಇದು ಸಾಧ್ಯ ಎಂಬುದು ಸಂಸ್ಥೆಯ ಬಲವಾದ ನಂಬಿಕೆ. ಅದಕ್ಕಾಗಿ ಈ ನಾಡಿನಲ್ಲಿ ಜನ ವಿಜ್ಞಾನ ಚಳುವಳಿಗಳ ಕರ್ಣಧಾರತ್ವವನ್ನು ವಹಿಸಿಕೊಂಡಿದೆ. ವಿಜ್ಞಾನದ ಅರಿವಿನಿಂದ ಜನರು ತಮ್ಮ ಸಮಸ್ಯೆಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗುತ್ತದೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನವು ಗೊತ್ತಾಗುತ್ತದೆ. ವಿಜ್ಞಾನ ಸಮಾಜ ಪರಿವರ್ತನೆಯಲ್ಲಿ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. 1991ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ರಾಜ್ಯದ 27 ಜಿಲ್ಲೆಗಳಲ್ಲಿ ತನ್ನ ಜಾಲ ಹರಡಿಕೊಂಡಿದೆ. ಸದ್ಯ ಇದರ ಸದಸ್ಯರ ಸಂಖ್ಯೆ 5000.

ಸಾಂಸ್ಥಿಕ ಸ್ವರೂಪ: ಭಾರತ ಜ್ಞಾನ ವಿಜ್ಞಾನ ಸಮಿತಿಯು ಕರ್ನಾಟಕ ಸಂಘಗಳ ಕಾಯ್ದೆ 1960 ರ ಅಡಿಯಲ್ಲಿ ನೊಂದಾಯಿತವಾದ ಸಂಸ್ಥೆಯಾಗಿದೆ. ಇದೊಂದು ಸ್ವಯಂ ಸೇವಾ ಸಂಸ್ಥೆ. ಯಾವುದೇ ರಾಜಕೀಯ ಪಕ್ಷದ ಭಾಗವಾಗಿ ಕಾರ್ಯಮಾಡುವುದಿಲ್ಲ. ಸಂಸ್ಥೆಯು 4 ಹಂತಗಳ ಸಂರಚನೆ ಹೊಂದಿದೆ. (ಬಾಕ್ಸ್ ನೋಡಿ) 15 ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳು ರಚನೆಯಾಗಿವೆ. 8 ಜಿಲ್ಲೆಗಳಲ್ಲಿ ಸಂಘಟನಾ ಸಮಿತಿಗಳು ಇವೆ. ಉಳಿದ 7 ಜಿಲ್ಲೆಗಳಲ್ಲಿ ಸಂಪರ್ಕ ಏರ್ಪಟ್ಟಿದೆ. ರಾಜ್ಯ ಸಮಿತಿಯು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಆವರಣದಲ್ಲಿ ತನ್ನ ಕಛೇರಿ ಹೊಂದಿದೆ. ಅಖಿಲ ಭಾರತ ವಿಜ್ಞಾನ ಚಳುವಳಿಗಳ ಜಾಲದ ಸದಸ್ಯ ಸಂಸ್ಥೆಯೂ ಹೌದು.

ಅಧ್ಯಕ್ಷ, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಕಾರ್ಯದರ್ಶಿಗಳು, ಖಜಾಂಚಿ ಹಾಗೂ ಕಾರ್ಯಕಾರಿಮಂಡಳಿ ಸಂಸ್ಥೆಯ ಪದಾಧಿಕಾರಿಗಳು. ಎರಡು ವರ್ಷಗಳ ಅವಧಿಗೆ ವಾರ್ಷಿಕ ಸರ್ವಸದಸ್ಯರು ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಒಮ್ಮತದಿಂದ ನಡೆಯುತ್ತದೆ. ಕಾರ್ಯಕಾರಿ ಸಮಿತಿಯ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು 'ಪದಾಧಿಕಾರಿಗಳ ಸಮಿತಿ' ಕಾರ್ಯ ಮಾಡುತ್ತಿದೆ. ಇದು ಪ್ರತಿ ತಿಂಗಳೂ ಸಭೆ ಸೇರುತ್ತದೆ. ಅಲ್ಲದೆ 4 ವಿಭಾಗಗಳಿಗೆ 4 ಜನ ಸಂಯೋಜಕರು ಇರುತ್ತಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕಾರ್ಯಕರ್ತರು ಪದಾಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕಾಗುತ್ತದೆ.

ಸದಸ್ಯರು: ಭಾರತ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಮುಖ್ಯವಾಗಿ ಶಿಕ್ಷಕರು, ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿದ್ದಾರೆ. ಅದರಂತೆ ವೈದ್ಯರು, ಇಂಜಿನಿಯರುಗಳು, ವಿಜ್ಞಾನಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು, ಯುವಕರು ಹಾಗೂ ವಿದ್ಯಾರ್ಥಿಗಳು ಸದಸ್ಯತ್ವ ಪಡೆದಿದ್ದಾರೆ. ಎಲ್ಲ ದುಡಿಯುವ ಜನವಿಭಾಗಗಳು ಅಂದರೆ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ಮಹಿಳೆಯರು ಬಿಜಿವಿಎಸ್ನ ಸದಸ್ಯರಾಗಿರಬೇಕೆಂಬುದು ನಮ್ಮ ಆಶೆ.

ಹಣಕಾಸು: ಪ್ರಾರಂಭದ ಕೆಲವು ವರ್ಷಗಳವರೆಗೆ ಕೇಂದ್ರ ಸಮಿತಿ, ದೆಹಲಿ ನೀಡುತ್ತಿದ್ದ ಹಣಕಾಸಿನ ನೆರವಿನಿಂದ ಸಂಘಟನೆ ಮತ್ತು ಕಾರ್ಯಕ್ರಮಗಳನ್ನು ಮಾಡುತ್ತ ಬರಲಾಯಿತು. ಸದ್ಯ ಅಂತಹ ಯಾವ ಹಣಕಾಸಿನ ನೆರವು ಕೇಂದ್ರ ಸಮಿತಿಯಿಂದ ಬರುತ್ತಿಲ್ಲ.
   
ಹಣಕಾಸಿನ ವಿಷಯದಲ್ಲಿ ಸಂಸ್ಥೆಯು ಸ್ವಾವಲಂಬಿಯಾಗಬೇಕೆಂದು ಬಲವಾಗಿ ಇಚ್ಛಿಸುತ್ತದೆ. ಪುಸ್ತಕಗಳು, ಮಾಸಪತ್ರಿಕೆ ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ಮಾರಾಟ ಮಾಡಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಯೋಜನೆ ಇದ್ದು, ಅದನ್ನು ಈಗ ಭಾಗಶಃ ಮಾಡಲಾಗುತ್ತದೆ.

ಪುಸ್ತಕಗಳು ಶೈಕ್ಷಣಿಕ ಮಾಸಪತ್ರಿಕೆ ಹಾಗೂ ಇತರ ಕಲಿಕಾ ಸಾಮಗ್ರಿಗಳ ಮಾರಾಟದಿಂದ ಹಣಕಾಸಿನ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುತ್ತದೆ. ಕಾರ್ಯಕರ್ತರು ಶಾಲೆಗಳಿಗೆ, ಸಭೆ ಸಮಾರಂಭಗಳಿಗೆ ತೆರಳಿ ಪುಸ್ತಕ ಮಾರಾಟ ಮಾಡುವುದು ವಿಶೇಷ. ಸರಕಾರ ಹಾಗೂ ಸರಕಾರದ ಕೆಲವು ಇಲಾಖೆಗಳು ನಮ್ಮ ಪ್ರಕಟಣೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವಂತೆ ವಿನಂತಿಸಿಕೊಳ್ಳಲಾಗುವುದು. ಸದಸ್ಯತ್ವ ಶುಲ್ಕ ಸಾರ್ವಜನಿಕರಿಂದ ವಂತಿಗೆ ಸಂಸ್ಥೆಯ ಹಣಕಾಸಿನ ಇತರ ಮೂಲಗಳು.