ಸಮಿತಿಯು ನಡೆಸುತ್ತಿರುವ ಯೋಜನೆಗಳು

ವಿದ್ಯಾಂಕುರ ಯೋಜನೆ ;
ಸರ್ ರತನ್ ಟಾಟಾ ಟ್ರಸ್ಟ್ ನ  ಆರ್ಥಿಕ ನೆರವಿನೊಂದಿಗೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ನವಂಬರ್ 2008 ರಿಂದ ಈ ಕಾರ್ಯಕ್ರಮ ಜಾರಿಯಲ್ಲಿದೆ. ಇದಕ್ಕೆ ಮೊದಲು ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯು ನಡೆಸುತ್ತಿತ್ತು. ಎರಡನೇ ಹಂತದಲ್ಲಿ ಸಮಿತಿ ಹಲವು ಬದಲಾವಣೆಗಳೊಂದಿಗೆ ಕಾರ್ಯಕ್ರಮವನ್ನು ಮೂರು ವರ್ಷಗಳ ಅವಧಿಗೆ ತೆಗೆದುಕೊಂಡು ಪೂರೈಸಿದೆ. ಟ್ರಸ್ಟ್ ಇನ್ನೂ ಒಂದು ವರ್ಷದ ಅವಧಿಗೆ ಕಾರ್ಯಕ್ರಮವನ್ನು ಮುಂದುವರಿಸಲು ಸೂಚನೆಯನ್ನು ನೀಡಿದ್ದು ಮತ್ತೆ ಒಂದು ವರ್ಷ ಮುಂದುವರಿಯಲಿದೆ. ಕಾರ್ಯಕ್ರಮವು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

    ಕ್ಲಸ್ಟರ್ ಅಭಿವೃದ್ದಿ ಕಾರ್ಯಕ್ರಮ : ಯಳಂದೂರು ತಾಲ್ಲೋಕಿನ ಗುಂಬಳ್ಳಿ, ಯಳಂದೂರು ಹಾಗು ಚಾಮರಾಜನಗರ ತಾಲ್ಲೋಕಿನ ಕೋಳೀಪಾಳ್ಯ ಕ್ಲಸ್ಟರ್ ಗಳ ಸಮಗ್ರ ಅಭಿವೃದ್ದಿ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಇದಕ್ಕಾಗಿ ಶಿಕ್ಷಕರಿಗೆ ತರಬೇತಿ, ತರಬೇತಿಗಳ ಅನುಪಾಲನೆ. ಸಮುದಾಯ ಸಬಲೀಕರಣದ ಭಾಗವಾಗಿ ಎಸ್.ಡಿ.ಎಂ.ಸಿಗಳ ಸಕ್ರಿಯಗೊಳಿಸುವಿಕೆ, ತಾಯಂದಿರ ಸಭೆಗಳು ಮತ್ತು ಮೇಳಗಳು ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿವೆ.
    ಕ್ಲಸ್ಟರ್ ಸಂಪನ್ಮೂಲ ಕೇಂದ್ರ : ಗುಂಬಳ್ಳಿ, ಯಳಂದೂರು, ಕೋಳೀಪಾಳ್ಯ ಮೂರು ಕ್ಲಸ್ಟರ್ ಗಳಲ್ಲಿ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಇಲ್ಲಿ ಶಿಕ್ಷಕರು, ಸಮುದಾಯ, ಮಕ್ಕಳಿಗೆ ಬೇಕಾದ ಪುಸ್ತಕಗಳು ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ. ಶಿಕ್ಷಕರು, ಶಿಕ್ಷಕ, ವಿದ್ಯಾರ್ಥಿಗಳು, ಸಮುದಾಯದ ಜನರು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಶಿಕ್ಷಕರು ತಮ್ಮ ದಿನನಿತ್ಯದ ಬೋಧನೆಗೆ ಇಲ್ಲಿನ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವರು. ಅಲ್ಲದೇ ಸಂಪನ್ಮೂಲ ಕೇಂದ್ರಕ್ಕೆ ಮಕ್ಕಳೊಂದಿಗೆ ಭೇಟಿಯನ್ನು ನೀಡುವರು. ಸಂಪನ್ಮೂಲ ಕೇಂದ್ರವು ಒಂದು ವಿಜ್ಞಾನ ಕೇಂದ್ರದಂತೆ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ತಿಂಗಳು ಒಂದು ಕಾರ್ಯಕ್ರಮವನ್ನು ಯೋಜಿಸಲಾಗುತ್ತಿದೆ. ಅಲ್ಲದೆ ಸಂಪನ್ಮೂಲ ಕೇಂದ್ರದ ಮೇಲ್ವಿಚಾರಕರು ಕೂಡಾ ಪ್ರತಿ ವಾರದಲ್ಲಿ ಒಂದೆರಡು ದಿನ ಶಾಲೆಗಳಿಗೆ ಭೇಟಿ ನೀಡುವರು. ಆಯಾ ಶಾಲೆಗಳಿಗೆ ಬೇಕಿರುವ ಸಾಮಗ್ರಿಗಳನ್ನು ಈ ಸಂದರ್ಭದಲ್ಲಿ ನೀಡುವರು. ಸಂಪನ್ಮೂಲ ಕೇಂದ್ರವು ರಜಾ ದಿನಗಳನ್ನು ಹೊರತು ಪಡಿಸಿ ಎಲ್ಲ ದಿನಗಳಲ್ಲಿ ತೆರೆದಿರುವುದು.
    ಶಿಕ್ಷಣದಲ್ಲಿ ಕಲೆ : ಕಲೆಯ ಮೂಲಕ ಭಾಷೆ,ಗಣಿತ ಹಾಗು ವಿಜ್ಞಾನ ವಿಷಯಗಳನ್ನು ಕಲಿಸುವ ವಿಶೇಷ ಕಾರ್ಯಕ್ರಮವಾಗಿದ್ದು ನಮ್ಮ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಲ್ಲಿ ಅನುಸರಿಸುವಂತೆ ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ ಶಿಕ್ಷಕರ ತರಬೇತಿಯನ್ನು ನಡೆಸಲಾಗುತ್ತಿದೆ. ಮತ್ತು ನಿರಂತರವಾಗಿ ಅನುಪಾಲನೆ ಮಾಡಲಾಗುತ್ತಿದೆ. ವರ್ಷವಿಡೀ ಮಕ್ಕಳು ಮಾಡಿದ ಚಟುವಟಿಕೆಗಳನ್ನು ಪ್ರತಿ ವರ್ಷ ತಾಲ್ಲೂಕಾ ಮಟ್ಟದಲ್ಲಿ 'ಮಕ್ಕಳ ಚಿತ್ರ ಕಲಾ ಪ್ರದರ್ಶನ'ಗಳನ್ನು ಏರ್ಪಡಿಸುವ ಮೂಲಕ ಪ್ರದರ್ಶಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಐ.ಎಫ್.ಎ. ಎಂಬ ಸಂಸ್ಥೆ ಹಣಕಾಸು ನೆರವು ನೀಡುತ್ತಿದೆ.
    ಕ್ರಿಯಾಸಂಶೋಧನೆ : ಚಾಮರಾಜನಗರದ ಉಪ್ಪಾರ ಸಮುದಾಯ ಹಾಗು ಮುಸ್ಲಿಂ ಸಮುದಾಯಗಳು ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದು ಈ ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಅವುಗಳ ಪ್ರಗತಿಗಾಗಿ ಕಾರ್ಯನಿರ್ವಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈಗಾಗಲೇ ಈ ಎರಡು ಸಮುದಾಯದ ಕುರಿತು ಅಧ್ಯಯನ ನಡೆಸಿ ವರದಿಗಳನ್ನು ತಯಾರಿಸಲಾಗಿದೆ. ಉಪ್ಪಾರ ಸಮುದಾಯದ ವರದಿಯ ಆಧಾರದಲ್ಲಿ ಹತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅನುಪಾಲನೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಇದಕ್ಕಾಗಿ ಒಂದು ಕೋರ್ ಸಮಿತಿ ರಚಿಸಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಮುದಾಯದ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಸಾಮಾಜಿಕ ಮೌಢ್ಯಗಳನ್ನು ಕಡಿಮೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲಾಗುತ್ತಿದೆ.
    ಶೈಕ್ಷಣಿಕ ಚಾವಡಿ : ಚಾಮರಾಜನಗರ ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಹಾಗು ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವುಗಳ ನಿವಾರಣೆಗಾಗಿ ಕೆಲಸ ಮಾಡುವ ಒತ್ತಡ ಗುಂಪಾಗಿ ಕಾರ್ಯನಿರ್ವಹಿಸುವುದು ಈ ಚಾವಡಿಯ ಉದ್ದೇಶವಾಗಿದೆ. ಜಿಲ್ಲೆಯಾದ್ಯಂತ ತಾಲ್ಲೋಕು ಸಮಿತಿಗಳನ್ನು ಹಾಗು ಜಿಲ್ಲಾ ಸಮಿತಿಯನ್ನು ಸಂಘಟಿಸಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಹಲವಾರು ಶೈಕ್ಷಣಿಕ ಸಮಸ್ಯೆಗಳ ಕುರಿತು ಜಿಲ್ಲಾಡಳಿತ, ಇಲಾಖೆ ಹಾಗೂ ಸಮುದಾಯದ ಮುಖಂಡರು, ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ. ಪ್ರತಿ ವರ್ಷ ಜಿಲ್ಲಾ ಶೈಕ್ಷಣಿಕ ಹಬ್ಬಗಳನ್ನು ಸಂಘಟಿಸಲಾಗುತ್ತಿದೆ.
    ಆಶ್ರಮ ಶಾಲಾ ಅಭಿವೃದ್ಧಿ ಕಾರ್ಯಕ್ರಮ : ಜಿಲ್ಲೆಯಲ್ಲಿ 19 ಆಶ್ರಮ ಹಾಗೂ ವಸತಿ ಶಾಲೆಗಳಿದ್ದು ಈ ಎಲ್ಲ ಆಶ್ರಮ ಶಾಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುತ್ತಿದೆ. ಶಿಕ್ಷಕರ ತರಬೇತಿ ಹಾಗೂ ಅನುಪಾಲನೆ, ಸಮುದಾಯ ಸಂಘಟನೆಯಂತಹ ಪ್ರಮುಖ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
    ಸಾಮಗ್ರಿಗಳ ಅಭಿವೃದ್ದಿ : ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸಂದರ್ಭಕ್ಕೆ ಪೂರಕವಾಗುವ ಹಾಗು ನಾವು ಗಳಿಸುವ ಅನುಭವಗಳನ್ನು ಕ್ರೋಢೀಕರಿಸಿ ಪುಸ್ತಕಗಳು, ಕೈಪಿಡಿಗಳು ಹಾಗು ಇತರ ಕಲಿಕಾ ಸಾಮಗ್ರಿಗಳನ್ನು ಅಭಿವೃದ್ದಿಪಡಿಸಲಾಗಿದೆ. ಅವುಗಳನ್ನು ಪ್ರಸ್ತುತ ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳಲ್ಲಿ ಇವುಗಳನ್ನು ಬಳಕೆಗೆ ಪೂರೈಸಲಾಗಿದೆ.
    ಕಲೆಯ ಮೂಲಕ ಶಿಕ್ಷಣ :  2008 ಸೆಪ್ಟಂಬರ್ ನಿಂದ ವಿದ್ಯಾಂಕುರ ಯೋಜನೆಯ ಅಡಿಯಲ್ಲಿ ನಡೆಸುತ್ತಿರುವ ಶಿಕ್ಷಣದಲ್ಲಿ ಕಲೆ ಕಾರ್ಯಕ್ರಮವನ್ನು ರಾಜ್ಯದ 12 ಜಿಲ್ಲೆಗಳ 15 ತಾಲ್ಲೋಕುಗಳ 150 ಶಾಲೆಗಳಿಗೆ ವಿಸ್ತರಿಸಲಾಗಿದೆ. ಶಿಕ್ಷಕರಿಗೆ ತರಬೇತಿ , ಸಮಾಲೋಚನಾ ಸಭೆಗಳು ಹಾಗು ಮಕ್ಕಳ ಕಲಾಮೇಳ ಈ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ. ಕಲೆಯ ಮೂಲಕ ಭಾಷೆ,ಗಣಿತ ಹಾಗು ವಿಜ್ಞಾನ ವಿಷಯಗಳನ್ನು ಕಲಿಸುವ ವಿಶೇಷ ಕಾರ್ಯಕ್ರಮವಾಗಿದ್ದು ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ಆರ್ಥಿಕ ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಸಂಚಾರಿ ಪ್ರಯೋಗಾಲಯ : ಸರ್ವಶಿಕ್ಷಣ ಅಭಿಯಾನದ ಆರ್ಥಿಕ ಸಹಕಾರದೊಂದಿಗೆ ಕಲಿಕಾ ಉನ್ನತೀಕರಣ ಯೋಜನೆಯ ಅಡಿಯಲ್ಲಿ ಚಾಮರಾಜನಗರದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿಜ್ಞಾನ ಶಿಕ್ಷಣದ ಮೂಲಕ ಹಳ್ಳಿಗಾಡಿನ ಮಕ್ಕಳ ಮತ್ತು ಶಿಕ್ಷಕರ ಆಸಕ್ತಿ ಸೃಜನಾತ್ಮಕ ಆಲೋಚನೆ, ಅಭಿಪ್ರೇರಣೆ ಮತ್ತು ಕಲಿಕೆಯ ಮಟ್ಟವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಡಿಸೆಂಬರ್ 2009 ರಲ್ಲಿ ಕಾರ್ಯಕ್ರಮವನ್ನು ಮೊದಲು ಕೊಳ್ಳೇಗಾಲ ತಾಲ್ಲೂಕಿನಲ್ಲಿ ಆರಂಭಿಸಲಾಯಿತು. ಜೂನ್ 2010 ರಿಂದ ಯಳಂದೂರು ತಾಲ್ಲೋಕಿನಲ್ಲಿ, ನವಂಬರ್ 2010 ರಿಂದ ಚಾಮರಾಜನಗರ ತಾಲ್ಲೋಕಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಒಂದು ಮಾರುತಿ ವ್ಯಾನನ್ನು ಬಳಸಲಾಗುತ್ತಿದೆ. ಕಾರ್ಯಕ್ರಮದ ಪ್ರಮುಖ ಅಂಶಗಳೆಂದರೆ:
    * ಸಂಚಾರಿ ಪ್ರಯೋಗಾಲಯದ ಶಾಲಾ ಭೇಟಿ ಹಾಗು ಕಾರ್ಯಕ್ರಮ ನೀಡುವುದು.
    * ಶಿಕ್ಷಕರಿಗೆ ತರಬೇತಿ
    * ಸಂಪನ್ಮೂಲ ಕೇಂದ್ರದ ನಿರ್ವಹಣೆ
ಸಂಚಾರಿ ಪ್ರಯೋಗಾಲಯದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು ಇರುತ್ತವೆ. ಪ್ರತಿ ದಿನ ಒಂದೊಂದು ಶಾಲೆಗೆ ಈ ಸಂಚಾರಿ ಪ್ರಯೋಗಾಲಯದ ಭೇಟಿ ನೀಡುತ್ತದೆ. ಜೊತೆಯಲ್ಲಿ ಇಬ್ಬರು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಮತ್ತು ಒಬ್ಬರು ಕಲಾ ವಿಭಾಗಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಮಾದರಿಗಳ ಬಗ್ಗೆ ವಿವರಣೆ ನೀಡುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಇದು ಆ ಶಾಲೆಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಪೋಷಕರು ವೀಕ್ಷಿಸುತ್ತಾರೆ.

ವಿಎಚ್ಎಸ್ಸಿ ತರಬೇತಿಗಳು ಮತ್ತು ಅನುಪಾಲನೆ
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ಸದಸ್ಯರಿಗೆ ತರಬೇತಿ ನೀಡುವ ಹಾಗೂ ವಿಎಚ್ಎಸ್ಸಿಗಳನ್ನು ಆರೋಗ್ಯ ವಿಚಾರಗಳಿಗೆ ಪೂರಕವಾಗಿ ಸ್ಪಂದಿಸುವಂತೆ ಮಾಡುವ ನಿಟ್ಟಿನಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಪ್ರಸ್ತುತ ಈ ಯೋಜನೆಯನ್ನು ಗದಗ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗಿದೆ.