ಸಂಘಟನೆಯು ಮುಂದಿನ ವರ್ಷಗಳಲ್ಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳು

ಸಂಘಟನೆಯು ಮುಂದಿನ ವರ್ಷಗಳಲ್ಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳು:
    ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ವರ್ಷ
    ಮೂಲ ವಿಜ್ಞಾನ ಕಲಿಕೆ ಹಾಗೂ ಬೋಧನೆಗಾಗಿ ಪ್ರಯತ್ನಗಳು
    ವಿಜ್ಞಾನ ಪ್ರಸಾರ್ ಸಹಯೋಗದಲ್ಲಿ ವಿಜ್ಞಾನ ಸಂವಹನ ಪುಸ್ತಕ ಪ್ರಕಟಣೆ
    ಶಿಕ್ಷಣದಲ್ಲಿ ಕಲೆ ವಿಸ್ತರಣೆ
    ಕಲಿಕಾ ಉನ್ನತೀಕರಣ ಯೋಜನೆ ವಿಸ್ತರಣೆ

ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ವರ್ಷ 2011
ವಿಶ್ವಸಂಸ್ಥೆಯು 2011ನೇ ವರ್ಷವನ್ನು ಅಂತಾರಾಷ್ಠ್ರೀಯ ರಸಾಯನಶಾಸ್ತ್ರ ವರ್ಷವನ್ನಾಗಿ ಆಚರಿಸಲು ಕರೆನೀಡಿದೆ. ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನೆಸ್ಕೋ ನೀಡಿದ ಸಲಹೆಯ ಆಧಾರದಲ್ಲಿ ಈ ವರ್ಷ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿಶ್ವದ ಎಲ್ಲಾ ರಾಷ್ಠ್ರಗಳಿಗೂ ಮನವಿ ಮಾಡಿದೆ. ಮನುಕುಲದ ಏಳಿಗೆಗಾಗಿ ರಸಾಯನಶಾಸ್ತ್ರದ ಕೊಡುಗೆಯನ್ನು ಪ್ರಶಂಸಿಸುವ ವಿಶ್ವದ ಹಬ್ಬವಾಗಿ ಅಂತರಾಷ್ಠ್ರೀಯ ರಸಾಯನಶಾಸ್ತ್ರ ವರ್ಷವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ವರ್ಷದ ಆಚರಣೆಯ ಮುಖ್ಯ ಉದ್ದೇಶಗಳೆಂದರೆ
   * ಜಗತ್ತಿನ ಅಗತ್ಯಗಳನ್ನು ನೀಗಲು ರಸಾಯನಶಾಸ್ತ್ರವು ನೀಡಿರುವ ಕೊಡುಗೆಗಳನ್ನು ಮೆಚ್ಚುವಂತೆ ಜನರಿಗೆ ತಿಳಿಸಿಕೊಡುವುದು.
   * ಯುವ ಜನತೆಯ ಅದರಲ್ಲೂ ವಿದ್ಯಾರ್ಥಿಗಳಲ್ಲಿ ರಸಾಯನಶಾಸ್ತ್ರದ ಬಗ್ಗೆ ಒಲವು ಮೂಡಿಸಲು ಅವರನ್ನು ಕ್ರಿಯಾಶೀಲವಾಗಿ ತೊಡಗಿಸುವುದು.
   * ರಸಾಯನಶಾಸ್ತ್ರದ ಕ್ರಿಯಾಶೀಲ ಸಂಶೋಧನೆಗಾಗಿ ಯುವ ಜನರಲ್ಲಿ ಕುತೂಹಲ ಮೂಡಿಸುವುದು.
    ಮೇಡಂ ಕ್ಯೂರಿ ಅವರಿಗೆ ನೊಬೆಲ್ ಪ್ರಶಸ್ತಿ ಸಂದ ಶತಕ ಸಂಭ್ರಮಾಚರಣೆಯ ಸಂದರ್ಭದ ಜೊತೆಯಲ್ಲೇ ರಾಸಾಯನಶಾಸ್ತ್ರದ ಬೆಳವಣಿಗೆ ಮತ್ತು ಇತಿಹಾಸದಲ್ಲಿ ಮಹಿಳೆಯರ ಪಾತ್ರವನ್ನು ಜಗತ್ತಿಗೆ ತೋರಿಸುವುದು.
    ದಿನನಿತ್ಯದ ಜೀವನದಲ್ಲಿ ಜನರು ಬಳಸುವ ರಾಸಾಯನಶಸ್ತ್ರ ಅದರಲ್ಲೂ ಜನಪದೀಯ ರಾಸಾಯನಶಾಸ್ತ್ರದ ಬಗ್ಗೆ ಸಾಮಾನ್ಯ ಜನರಲ್ಲಿ ಹಾಗೂ ವಿದ್ಯಾಥಿಗಳಲ್ಲಿ ಅನುಭಾವ ಮೂಡುವಂತೆ ಮಾಡುವುದು.
ಭಾರತ ಜ್ಞಾನ ವಿಜ್ಞಾನ ಸಮಿತಿಯು ತನ್ನ ಆರಂಭದ ದಿನದಿಂದಲೇ ಸಾಕ್ಷರತೆಯ ಜೊತೆಗೆ ವಿಜ್ಞಾನ ವನ್ನು ಜನಪ್ರಿಯಗೊಳಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸಂಘಟನೆಯಾಗಿರು ವುದರಿಂದ ಅಂತಾರಾಷ್ಠ್ರೀಯ ರಾಸಾಯನಶಾಸ್ತ್ರ ವರ್ಷವನ್ನು ಆಚರಣೆ ಮಾಡಲು ಇತರೆ ಸಂಘಟನೆಗಳ ಜೊತೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ದರಿಸಿದೆ. ಈ ಸಂದರ್ಭದಲ್ಲಿ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಸಾಮಾನ್ಯ ಜನರ ನಡುವೆ ರಾಸಾಯನಶಾಸ್ತ್ರದ ಕೊಡುಗೆಗಳನ್ನು ತಿಳಿಸಲು ಅನುವಾಗುವಂತೆ ಚಟುವಟಿಕೆಗಳನ್ನು ನಡೆಸಲು ತೀರ್ಮಾನಿಸಿದೆ. ರಾಜ್ಯದ ಪ್ರೌಢಶಾಲೆ ಹಾಗು ಪ್ರಾಥಮಿಕ ಶಾಲೆಗಳಲ್ಲಿ  ಬಹಳ ಹಿಂದಿನಿಂದಲೂ ವಿಜ್ಞಾನ ಸಂಘಗಳು ರಚನೆಯಾಗಿದ್ದರೂ ಅವುಗಳ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲ. ಇದಕ್ಕೆ ಸೂಕ್ತ ತರಬೇತಿ ಹಾಗು ನಿರಂತರ ಮಾರ್ಗದರ್ಶನದ ಕೊರತೆಯೇ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. ರಸಾಯನ ಶಾಸ್ತ್ರ ವರ್ಷಾಚರಣೆಯ ಸಂಧರ್ಭದಲ್ಲಿ ಈ ಕೆಳಗಿನ ಎಲ್ಲಾ ಕಾರ್ಯಕ್ರಮಗಳನ್ನು ವಿಜ್ಞಾನ ಸಂಘಗಳನ್ನು ಕ್ರಿಯಾಶೀಲಗೊಳಿಸಿ ಅವುಗಳ ಮೂಲಕ ಕೈಗೊಳ್ಳಲು ಯೋಜಿಸಲಾಗಿದೆ. ರಾಜ್ಯದ 25 ತಾಲೋಕುಗಳಲ್ಲಿ ತಲಾ 10 ಶಾಲೆಗಳನ್ನು ಆಯ್ದುಕೊಂಡು ಒಟ್ಟು 250 ಶಾಲೆಗಳ ಮಾರ್ಗದರ್ಶಿ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಕಾರ್ಯಕ್ರಮ ಜಾರಿಯಾಗುವಂತೆ ನೋಡಿಕೊಳ್ಳಲಾಗುವುದು. ತರಭೇತಿಯ ಜೊತೆಗೆ ಶಿಕ್ಷಕರು ತಮ್ಮ ಅನುಭವವನ್ನು ಪರಸ್ಪರ ಹಂಚಿಕೊಳ್ಳುವಂತೆ ಮಾಡಲು ವರ್ಷದಲ್ಲಿ 2 ಬಾರಿ ಸಮಾಲೋಚನಾ ಸಭೆಗಳನ್ನು ನಡೆಸಲಾಗುವುದು. ಪ್ರತೀ ತಿಂಗಳು  ವಿಜ್ಞಾನ ಸಂಘದಲ್ಲಿ ನಡೆಸ ಬೇಕಾದ ಚಟುವಟಿಕೆಗಳ ಬಗ್ಗೆ ವಿವರಣೆ ಹಾಗು ವಿವಿಧ ಚಟುವಟಿಕೆಗಳನ್ನು ಚೆನ್ನಾಗಿ ನಡೆಸಿರುವ ಶಾಲೆಗಳ ಬಗ್ಗೆ ವರದಿಯನ್ನೊಳಗೊಂಡ ಮಾಹಿತಿ ಪುಸ್ತಿಕೆ ಮತ್ತು ಸಾಮಗ್ರಿಯನ್ನು ಆಯ್ಕೆಗೊಂಡಿರುವ ಪ್ರತೀ ಶಾಲೆಗೆ ಕಳುಹಿಸಿಕೊಡಲಾಗುವುದು. ಈ ಸಾಮಗ್ರಿಯು ಮಾರ್ಗದರ್ಶಿ ಶಿಕ್ಷಕರಿಗೆ ಬಹಳ ಉಪಯುಕ್ತ ಮಾರ್ಗದರ್ಶಿಯಾಗುವುದು.
    ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ರಾಸಾಯನಶಾಸ್ತ್ರ ಪ್ರಯೋಗಗಳ ಪ್ರಾತ್ಯಕ್ಷಿತೆಗಳನ್ನು ನಡೆಸುವುದು.
    ಜಾನಪದ ರಾಸಾಯನಶಾಸ್ತ್ರ ಮತ್ತು ಜನರ ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಂಘಟಿಸುವುದು.
    ಮಕ್ಕಳನ್ನು ಸ್ಥಳೀಯ ಕೈಗಾರಿಕೆಗಳಿಗೆ ಭೇಟಿ ಮಾಡಿಸುವುದು ಮತ್ತು ತಜ್ಞರೊಡನೆ ಸಂವಾದ ಏರ್ಪಡಿಸುವುದು.
    ರಾಸಾಯನಶಾಸ್ತ್ರದ ಇತಿಹಾಸ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಅದರ ಪಾತ್ರ ಕುರಿತ ಕಿರುಹೊತ್ತಿಗೆಗಳನ್ನು ಮಕ್ಕಳಿಗಾಗಿಯೇ ಪ್ರಕಟಿಸುವುದು.
    ರಾಸಾಯನಶಾಸ್ತ್ರ ಕಲಿಕೆಗೆ ಪೂರಕವಾದ ಪೋಸ್ಟರ್ಗಳು ಹಾಗೂ ಚಿತ್ರಪುಸ್ತಿಕೆಯನ್ನು ಪ್ರಕಟಿಸುವುದು.
    ರಾಸಾಯನಶಾಸ್ತ್ರದ ಬಗ್ಗೆ ಹೆಚ್ಚು ಜ್ಞಾನ ಗಳಿಸಲು ಮಕ್ಕಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು.
    ವಿದ್ಯಾರ್ಥಿಗಳ ಸಂವಾದ ಏರ್ಪಡಿಸಿ ಮಕ್ಕಳು ಮೂಲ ವಿಜ್ಞಾನವನ್ನು ಒಂದು ವಿಶೇಷ ಜ್ಞಾನಶಾಖೆ ಎಂದು ಮೆಚ್ಚುವಂತೆ ಮಾಡುವುದು.

ಮೂಲ ವಿಜ್ಞಾನ ಕಲಿಕೆ ಹಾಗೂ ಬೋಧನೆಗಾಗಿ ಪ್ರಯತ್ನಗಳು
    ಇತ್ತೀಚಿನ ವರದಿಗಳ ಪ್ರಕಾರ ಉನ್ನತ ಶಿಕ್ಷಣದ ಹಂತದಲ್ಲಿ ಮೂಲ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಕಲಿಯುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಮೂಲ ವಿಜ್ಞಾನ ಕಲಿಕೆಯು ಸಂಶೋಧನೆ ಮತ್ತು ಸೈದ್ಧಾಂತಿಕ ನಿಯಮಗಳ ಅನ್ವೇಷಣೆಯ ದೃಷ್ಟಿಯಿಂದ ಬಹಳ ಮುಖ್ಯವಾದ ವಿಷಯವಾಗಿದೆ. ಮಕ್ಕಳು ಮೂಲ ವಿಜ್ಞಾನದ ಬಗ್ಗೆ ಒಲವು ಬೆಳೆಸಿಕೊಂಡು ಅದನ್ನು ಉನ್ನತ ಹಂತದ ವ್ಯಾಸಂಗಕ್ಕಾಗಿ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಿವೆ. ಈ ಕಾರಣಕ್ಕಾಗಿ ವಿಷನ್ ಗ್ರೂಪ್ ಸಹಾ ರಚನೆಯಾಗಿದೆ. ಇದಕ್ಕೆ ಪೂರಕವಾಗಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ಶಿಕ್ಷಕರು ಮತ್ತು ಮಕ್ಕಳ ನಡುವೆ ಕೆಲಸ ಮಾಡಲು ಅನೇಕ ಹಂತದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳೆಂದರೆ,
    ರಾಜ್ಯ ಸಂಪನ್ಮೂಲ ಕೇಂದ್ರ : ವಿಜ್ಞಾನ ಶಿಕ್ಷಕರ ತರಬೇತಿಗಾಗಿ ಮತ್ತು ವಿಜ್ಞಾನ ಸಾಮಗ್ರಿಗಳ ಅಭಿವೃದ್ಧಿಗಾಗಿ ವಿಜ್ಞಾನ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಲಾಗುವುದು. ಈಗಾಗಲೇ ವಿದ್ಯಾಂಕುರ ಹಾಗೂ ಲೀಪ್ ಯೋಜನೆಗಳ ಭಾಗವಾಗಿ ಸಂಪನ್ಮೂಲ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಕೆಲವು ಸಾಮಗ್ರಿಗಳನ್ನೂ ಅಭಿವೃದ್ಧಿಗೊಳಿಸಲಾಗಿದೆ. ಇದರ ಅನುಭವದ ಆಧಾರದಲ್ಲಿ ಮುಂದುವರೆಯಲಾಗುವುದು. ವಿಜ್ಞಾನ ಕಲಿಕೆಗೆ ಪೂರಕವಾದ, ಶಾಲಾ ಪಠ್ಯಕ್ರಮಕ್ಕೆ ಪೂರಕವಾದ ಸಾಮಗ್ರಿಗಳನ್ನು ಹೊಂದುವುದು ಅವಶ್ಯಕ. ಈ ಸಾಮಗ್ರಿಗಳು ಮಾದರಿಗಳು, ಆಟಿಕೆಗಳು, ಪ್ರಯೋಗಗಳು, ಯೋಜನಾ ಕಾರ್ಯಗಳು, ಮಾಡಿ ನೋಡು, ವಿಡಿಯೋ ಸಿ.ಡಿ ಗಳು, ಕಲಿಕೆ ಓದುವ ಸಾಮಗ್ರಿ ಮುಂತಾದವನ್ನು ಒಳಗೊಂಡಿರುತ್ತವೆ. ಐ.ಟಿ ಯನ್ನು ಬಳಸಿ ಕಲಿಯಬಹುದಾದ ಸಾಧ್ಯತೆಗಳನ್ನೂ ಅನ್ವೇಷಣೆ ಮಾಡಲಾಗುವುದು.
    ಸಂಪನ್ಮೂಲ ತಂಡ : ವಿಜ್ಞಾನ ಕಲಿಕೆ ಹಾಗೂ ಬೋಧನೆಗೆ ಸಹಾಯ ಮಾಡಬಲ್ಲ ಒಂದು ಸಂಪನ್ಮೂಲ ತಂಡವನ್ನು ರಚಿಸಲಾಗುವುದು. ಈ ತಂಡವು ವಿವಿಧ ಕ್ಷೇತ್ರದ ಪರಿಣತರನ್ನು, ವಿಜ್ಞಾನಿಗಳನ್ನು ಒಳಗೊಂಡಿರುತ್ತದೆ. ಈ ತಂಡ ನೇರವಾಗಿ ಸಾಮಗ್ರಿಗಳ ತಯಾರಿಕೆ ಅಥವಾ ಕಾರ್ಯಾಗಾರಗಳಲ್ಲಿ ಭಾಗವಹಿಸದೇ ಇರಬಹುದು. ಆದರೆ ಪರಿಕಲ್ಪನೆಗಳ ಸ್ಪಷ್ಟತೆಗಾಗಿ, ಸಾಧ್ಯತೆಗಳನ್ನು ಹುಡುಕುವುದಕ್ಕಾಗಿ ವಿಜ್ಞಾನ ಸಂವಹನಕಾರರಿಗೆ ಸಹಾಯ ಮಾಡುತ್ತದೆ.
    ಶಾಲಾ ಮಟ್ಟದಲ್ಲಿ ವಿಜ್ಞಾನ ಕೇಂದ್ರಗಳ ಸ್ಥಾಪನೆ : ನಮ್ಮ ಈ ವರೆಗಿನ ಅನುಭವಗಳ ಆಧಾರದಲ್ಲಿ ಹಾಗೂ ನಮ್ಮ ಸಂಘಟನೆ ಕ್ರಿಯಾಶೀಲವಾಗಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ 250 ಹಾಗೂ ಪ್ರೌಢ ಹಂತದಲ್ಲಿ 250 ಒಟ್ಟು 500 ಶಾಲಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳ ಸಂಚಾಲಕರನ್ನಾಗಿ ವಿಜ್ಞಾನ ಶಿಕ್ಷಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲು ಸಂಪನ್ಮೂಲ ತಂಡದ ಸಹಾಯ ಪಡೆಯಲಾಗುವುದು. ಈ ಕೇಂದ್ರಗಳು ವರ್ಷದಲ್ಲಿ ಕನಿಷ್ಟ 8-10 ಚಟುವಟಿಕೆಗಳನ್ನು ನಡೆಸುತ್ತವೆ. ಮತ್ತು ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳುತ್ತವೆ. ರಾಜ್ಯ ಸಂಪನ್ಮೂಲ ಕೇಂದ್ರವು ಶಾಲಾ ವಿಜ್ಞಾನ ಸಂಘಗಳ ಮಾರ್ಗದರ್ಶಿ ಶಿಕ್ಷಕರಿಗೆ ತರಬೇತಿ ನೀಡುತ್ತದೆ. ಆಲ್ಲದೇ ವಿಜ್ಞಾನ ಕೇಂದ್ರಗಳು ನಡೆಸಬಹುದಾದ ಚಟುವಟಿಕೆಗಳು, ಸಾಮಗ್ರಿಗಳ ಕುರಿತು ಮಾಹಿತಿ ನೀಡುತ್ತದೆ. ಇದಕ್ಕಾಗಿ ಪ್ರತಿ ಮೂರು ತಿಂಗಳಿಗೊಂದು ಕಿರುಹೊತ್ತಿಗೆಯನ್ನು ತಯಾರಿಸಲಾಗುತ್ತದೆ.
    ಜಿಲ್ಲೆ/ತಾಲ್ಲೂಕ್ ಮಟ್ಟದಲ್ಲಿ ವಿಜ್ಞಾನ ಶಿಕ್ಷಕರ ವೇದಿಕೆ/ ವಿಜ್ಞಾನ ಕೇಂದ್ರ : ಇದು ಶಾಲಾ ವಿಜ್ಞಾನ ಕೇಂದ್ರಗಳ ಮಾರ್ಗದರ್ಶಿ ಶಿಕ್ಷಕರನ್ನೊಳಗೊಂಡ ಶಿಕ್ಷಕರ ವೇದಿಕೆ. ಇದರ ಎಲ್ಲ ಚಟುವಟಿಕೆಗಳನ್ನು ರಾಜ್ಯ ಸಂಪನ್ಮೂಲ ತಂಡದ ಮಾರ್ಗದರ್ಶನದ ಅಡಿಯಲ್ಲಿ ಬಿ.ಜಿ.ವಿ.ಎಸ್.ನ ಘಟಕಗಳು ಸಂಯೋಜಿಸುತ್ತವೆ. ಇದರ ಫಲಿತಾಂಶವಾಗಿ ಮಾರ್ಗದರ್ಶಿ ಶಿಕ್ಷಕರು ಹಾಗೂ ಶಾಲಾ ವಿಜ್ಞಾನ ಕೇಂದ್ರದ ಮಕ್ಕಳು ತಯಾರಿಸಿದ ಸಾಮಗ್ರಿಗಳನ್ನೊಳಗೊಂಡ ವಿಜ್ಞಾನ ಕೇಂದ್ರ ಅಸ್ತಿತ್ವಕ್ಕೆ ಬರುವುದು. ಇಲ್ಲಿ ಸಂಪನ್ಮೂಲ ಸಾಮಗ್ರಿಗಳ ಜೊತೆ ಆಕರಗ್ರಂಥಗಳು ಮುಂತಾದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಉಪಯೋಗವಾಗಬಲ್ಲ ಪುಸ್ತಕಗಳನ್ನು ಇರಿಸಲಾಗುವುದು. ಇದು ರಾಜ್ಯ ಸಂಪನ್ಮೂಲ ಕೇಂದ್ರದ ಕಿರು ರೂಪವಾಗಿ ಕೆಲಸ ಮಾಡುವುದು. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಈ ಕೇಂದ್ರವು ತೆರೆದಿದ್ದು ಶಿಕ್ಷಕರು ಹಾಗೂ ಮಕ್ಕಳು ಉಪಯೋಗಿಸಬಹುದಾಗಿದೆ. ಶಿಕ್ಷಕರು ಹಾಗೂ ವಿಜ್ಞಾನಾಸಕ್ತರ ಕಿರು ಚರ್ಚೆಗಳು ಕಾರ್ಯಾಗಾರಗಳಿಗೆ ಇದನ್ನು ಬಳಸಿಕೊಳ್ಳಲಾಗುವುದು. ಇದನ್ನು ಕೇಂದ್ರ ಸ್ಥಳದಲ್ಲಿರುವ ಯಾವುದಾದರೂ ಶಾಲೆಯಲ್ಲಿ ತೆರೆಯಲಾಗುವುದು. ಪ್ರತಿ ವರ್ಷ ಈ ಕೇಂದ್ರದ ಅಡಿಯಲ್ಲಿ ಮಕ್ಕಳ ವಿಜ್ಞಾನ ಬೇಸಿಗೆ ಶಿಬಿರಗಳನ್ನು ಸಂಘಟಿಸಬಹುದಾಗಿದೆ.
    ಜಿಲ್ಲಾ/ ರಾಜ್ಯ ಮಟ್ಟದಲ್ಲಿ ಮಕ್ಕಳ ಹಬ್ಬ : ವರ್ಷವಿಡಿ ಶಾಲಾ ವಿಜ್ಞಾನ ಕೇಂದ್ರಗಳು ನಡೆಸಿದ ಚಟುವಟಿಕೆಗಳು ಹಾಗೂ ತಯಾರಿಸಿದ ಸಾಮಗ್ರಿಗಳು, ಕಲಿತ ವಿಷಯಗಳು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವರ್ಷಕ್ಕೊಂದು ಬಾರಿ 'ಮಕ್ಕಳ ಹಬ್ಬ'ವನ್ನು ಸಂಘಟಿಸಬಹುದು. ಜಿಲ್ಲೆ/ತಾಲ್ಲೂಕ್ ಹಂತದಲ್ಲಿ ಸಂಘಟಿಸುವ ಬೇಸಿಗೆ ಶಿಬಿರಗಳಿಗೆ ಇದನ್ನು ಜೋಡಿಸಲಾಗುವುದು. ರಾಜ್ಯ ಮಟ್ಟದಲ್ಲೂ ಇಂತಹ ಒಂದು ಮಕ್ಕಳ ಹಬ್ಬವನ್ನು ಸಂಘಟಿಸಲಾಗುವುದು.
ವಿಜ್ಞಾನ ಪ್ರಸಾರ್ ಸಹಯೋಗದಲ್ಲಿ ವಿಜ್ಞಾನ ಸಂವಹನ ಪುಸ್ತಕ ಪ್ರಕಟಣೆ
ಮಕ್ಕಳು, ಶಿಕ್ಷಕರು ಮತ್ತು ವಿಜ್ಞಾನಾಸಕ್ತರ ಜ್ಞಾನವನ್ನು ಹೆಚ್ಚಿಸುವ ಪ್ರಯತ್ನವಾಗಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ವಿಜ್ಞಾನ ಪ್ರಸಾರ್ ನೆಟ್ ವರ್ಕ್ ಅನೇಕ ಕಿರು ಹೊತ್ತಿಗೆಗಳು ಹಾಗೂ ಪುಸ್ತಕಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಕಟಿಸಿದೆ. ಈ ಪುಸ್ತಕಗಳನ್ನು ಈಗಾಗಲೇ ಕನ್ನಡದಲ್ಲಿ ತರುವ ಕಾರ್ಯವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿಯು ಕೈಗೆತ್ತಿಕೊಂಡಿದೆ. ಈ ಪುಸ್ತಕಗಳನ್ನು ಶಾಲೆಗಳಿಗೆ ಮತ್ತು ವಿಜ್ಞಾನ ಸಂಘಗಳಿಗೆ ತಲುಪಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರಯತ್ನಿಸಲಾಗುವುದು. ಅದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಲಾಗುವುದು.
ಶಿಕ್ಷಣದಲ್ಲಿ ಕಲೆ ವಿಸ್ತರಣೆ
ಸಮಿತಿಯು ಪ್ರಸ್ತುತ ರಾಜ್ಯದ 150 ಶಾಲೆಗಳಲ್ಲಿ ಅನುಷ್ಠಾನ ಮಾಡಿರುವ ಶಿಕ್ಷಣದಲ್ಲಿ ಕಲೆ ಕಾರ್ಯಕ್ರಮದ ಅವಧಿ ಮುಗಿಯುತ್ತಿದ್ದು, ಇಂಡಿಯಾ ಫೌಂಢೇಶನ್ ಫಾರ್ ಆರ್ಟ್ಸ್ ಅದನ್ನು ಇತರೆ ಶಾಲೆಗಳಿ ವಿಸ್ತರಿಸಲು ಕೇಳಿಕೊಂಡಿರುವ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮವನ್ನು ವಿಜ್ಞಾನ ಸಂಘಗಳು ಕೆಲಸ ಮಾಡುವ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನ ಮಾಡಲಾಗುವುದು. ಇದರಿಂದ ಚಟುವಟಿಕೆಗಳನ್ನು ಒಂದೇ ಕಡೆ ಸಮಗ್ರಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳು ವಿಜ್ಞಾನ ಯೋಜನೆಗಳನ್ನು ಕೈಗೊಳ್ಳುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾದ ಕಲಿಕಾ ವಿಧಾನವಾಗುತ್ತದೆ.
ಕಲಿಕಾ ಉನ್ನತೀಕರಣ ಯೋಜನೆ ವಿಸ್ತರಣೆ
ಈಗಾಗಲೇ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ಕಲಿಕಾ ಉನ್ನತೀಕರಣ ಯೋಜನೆಯನ್ನು (ಎಲ್.ಇ.ಪಿ) ಚಾಮರಾಜನಗರದಲ್ಲಿ ಅನುಷ್ಠಾನ ಮಾಡಲಾಗಿದೆ. ಇಲಾಖೆಯು ಈ ಕಾರ್ಯಕ್ರಮವನ್ನು ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ವಿಸ್ತರಿಸಲು ಅನುವಾಗುವಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ. ಈ ಹಿನ್ನಲೆಯಲ್ಲಿ ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಎಲ್.ಇ.ಪಿ ಅನುಷ್ಠಾನಗೊಳ್ಳುವ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. (ಈ ಯೋಜನೆಯ ವಿವಿಧ ಚಟುವಟಿಕೆಗಳ ಬಗ್ಗೆ ಈಗಾಗಲೇ ವಿವರಗಳನ್ನು ಒದಗಿಸಿದೆ)